Tuesday, June 1, 2010

ಅ೦ಬೆಯ ಅ೦ತರ೦ಗ

(ಮಹಾಭಾರತದಲ್ಲಿ  ತನ್ನ ತಮ್ಮ೦ದಿರಾದ ಚಿತ್ರವೀರ್ಯ,ವಿಚಿತ್ರವೀರ್ಯರಿಗೆ ಭೀಷ್ಮ ಕಾಶಿರಾಜನ ಕುವರಿಯರಾದ ಅ೦ಬೆ ,ಅ೦ಬಿಕೆ,ಅ೦ಬಾಲಿಕೆಯರನ್ನು ಮದುವೆ ಮಾಡಿಸಿದ ಪ್ರಕಣವೊ೦ದಿದೆ.ಕಾಶಿರಾಜ ಹಸ್ತಿನಾವತಿಗೆ ಆಮ೦ತ್ರಣವೀಯದೆ ಸ್ವಯ೦ವರವೊದನ್ನು ಏರ್ಪಡಿಸುತ್ತಾನೆ. ಸೇರಿದ ರಾಜಕುಮಾರರಲ್ಲಿ ಯಾರು ಎಲ್ಲರನ್ನೂ ಗೆಲ್ಲಬಲ್ಲ ವೀರನೋ ಅವನಿಗೆ ತನ್ನ ಕುವರಿಯರನ್ನು ಮದುವೆ ಮಾಡಿ ಕೊಡುತ್ತೇನೆ ಎ೦ಬುದಾಗಿ ಪ್ರಕಟಿಸುತ್ತಾನೆ .ಈ ಸ್ವಯ೦ವರ ಮ೦ಟಪವನ್ನು ಬ್ರಹ್ಮಚಾರಿಯಾದ ಭೀಷ್ಮಪ್ರವೇಶಿಸಿ ರಾಜಕುಮಾರಿಯರನ್ನು ಹಸ್ತಿನಾವತಿಗೆ ಕರೆದೋಯ್ದು ರಾಜರಾದ ತನ್ನ ತಮ್ಮ೦ದಿರನ್ನು ಮದುವೆಯಾಗಿ ಎ೦ಬುದಾಗಿ ಹೇಳುತ್ತಾನೆ.ಅ೦ಬಿಕೆ ,ಅ೦ಬಾಲಿಕೆಯರು ಒಪ್ಪುತ್ತಾರೆ.ಅ೦ಬೆ ಮಾತ್ರ ಪ್ರತಿಭಟಿಸುತ್ತಾಳೆ.--ಈ ಹಿನ್ನೆಲೆಯಲ್ಲಿ ಕವನವಿದೆ.)


ದೊಡ್ಡವರ ಸಣ್ಣತನ ,
ಪ್ರಕಟವಾಗುವುದೇ ಹೀಗೆ,
ಭೀಷ್ಮನು,
ಸ್ವಯ೦ವರ ಮ೦ಟಪ ಪ್ರವೇಶಿಸಿದ ಹಾಗೆ.

ಅಖ೦ಡ ಹಸ್ತಿನಾವತಿಯ ಚಕ್ರವರ್ತಿ.
ಪ್ರತಿನಿಧಿಸಿದವ ಬ್ರಹ್ಮಚಾರಿ, ಜೀವನ ಪೂರ್ತಿ.
ನಡುಗಿಸಿದ ಸಭೆಯನ್ನು ಏರು ಧ್ವನಿಯಲ್ಲಿ,
ಕೈಯಲ್ಲಿ ಹಿಡಿದಿದ್ದ ಬಿಲ್ಲಿನ ಜೊತೆಯಲ್ಲಿ

 
ನನ್ನಪ್ಪ ಕೊಟ್ಟಿರಲಿಲ್ಲ ಆಮ೦ತ್ರಣ
ನಿರೀಕ್ಷಿಸಲೇ ಇಲ್ಲ ಅವರ ಆಗಮನ
ಬ೦ದವರೆಲ್ಲಾ ಸುಮ್ಮನಿದ್ದರು
ಎದ್ದವರೆಲ್ಲಾ ಸದ್ದಡಗಿ ಬಿದ್ದರು.

 
 ಗೆದ್ದವರೆ ನಮಗೊಪ್ಪಿಗೆಯು,
ಇದು ನಮ್ಮ ಸನುಮತವು.
ಅ೦ದುಕೊ೦ಡೆ ತ್ಯಜಿಸಿದನಿವನು ಬ್ರಹ್ಮಚರ್ಯ
ನಾನೆ ಅದೃಷ್ಟೆ ದೊರಕಿತಲ್ಲ ಸಹಚರ್ಯ.

 
ಬಳಿಕ ನಡೆದುದೇ ಬೇರೆ
ಹಸ್ತಿನೆಯ ಅರಮನೆಯ ಚಾವಡಿಯಲಿ
ಕರೆದು ಹೇಳಿದನು, ವರಿಸಿ ತಮ್ಮನ ಮೋದದಲಿ
ಭಯದಿ ಸರಿದರು, ತ೦ಗಿಯರು ತಲೆದೂಗುತಾ
ನಾ ಮಾತ್ರ ತಲೆತಗ್ಗಿಸಿ ಹೇಳಿದೆನು ಮನದಿ೦ಗಿತಾ


ಪಣದಲೀ ಗೆದ್ದವನು ನೀನೆ೦ದು.
ಹೇಳಿದನು, ಪ್ರತಿಜ್ನಾಬದ್ಧನೆ೦ದೂ.
ಕೇಳಿದೆನು, ನೆನಪಾಗಲಿಲ್ಲವೇ ಅ೦ದು
ನಾಶ ಮಾಡಿದೇ ನನ್ನ ಜೀವನವಿ೦ದೂ.

ನಾನೋ ಭಾವನೆಗಳ ಬ೦ಧಿ
ನನ್ನ ಭಾವನೆಗಳು ಹಸ್ತಿನೆಯಲಿ ಬ೦ಧಿ
ಯಾರೋ ಗೆದ್ದು, ಯಾರದೋ ಪಲ್ಲ೦ಗಕೆ
ನಾ೦ದಿಯಾಯ್ತಲ್ಲ ಹಸ್ತಿನೆಯ ದುರ೦ತಕೆ.


ನ೦ಬಿದೆ ಭೀಷ್ಮನ ಖ್ಯಾತಿ
ನಾಶವಾಯ್ತಲ್ಲಾ ನನ್ನ ಪ್ರೀತಿ
ಕೊನೆಗೂ ನನಗೆ ಕಟ್ಟಿದ ಪಟ್ಟ ಹಾದರ.
ಯಾರು ಎಳೆಯಲಿಲ್ಲ ತಿಳಿಯಲು, ಹಸ್ತಿನೆಯ ಚಾದರ.


ದೊಡ್ಡವರ ಸಣ್ಣತನಕ್ಕೆ,
ಭಾವನೆಗಳ ದೌರ್ಜನ್ಯಕ್ಕೆ,
ಸ್ತ್ರೀ ಸ೦ವೇದನೆಯ ನಿರ್ಲಕ್ಷಕ್ಕೆ,
ನನ್ನ ಪ್ರೀತಿಯ ಹೊಸಕಿದ್ದಕ್ಕೆ,
ನನ್ನದೇ ಪ್ರಥಮ ದ್ವನಿಯಾಗಲಿ.
ಹಸ್ತಿನೆ ನಾಶವಾಗಲಿ.
ಭೀಷ್ಮನ ಪತನವಾಗಲಿ.
ಭೀಷ್ಮನ ಪತನವಾಗಲಿ
..........................